Asianet Suvarna News Asianet Suvarna News

ಬೆಂ.ಪದವೀಧರ ಕ್ಷೇತ್ರ : ಕಾಂಗ್ರೆಸ್ ಮತ್ತು ಕಮಲ-ದಳ ಪಕ್ಷಗಳಿಗೆ ಪ್ರತಿಷ್ಠೆ

  ಲೋಕಸಭಾ ಚುನಾವಣೆ ಬೆನ್ನ ಹಿಂದೆಯೇ ವಿಧಾನ ಪರಿಷತ್ ನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕಾರ್ಯಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.

Bengaluru  Graduate  Constituency Election Prestige for Congress and Kamal-Dal parties snr
Author
First Published May 5, 2024, 12:11 PM IST

 -ಎಂ.ಅಫ್ರೋಜ್ ಖಾನ್

  ರಾಮನಗರ :  ಲೋಕಸಭಾ ಚುನಾವಣೆ ಬೆನ್ನ ಹಿಂದೆಯೇ ವಿಧಾನ ಪರಿಷತ್ ನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕಾರ್ಯಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.

ಆರು ತಿಂಗಳ ಹಿಂದೆಯೇ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮೋಜಿಗೌಡ ಹೆಸರು ಘೋಷಣೆಯಾಗಿದ್ದರೆ, ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಸರು ಇನ್ನೂ ಅಂತಿಮಗೊಂಡಿಲ್ಲ. ಟಿಕೆಟ್ ಗಾಗಿ ಪೈಪೋಟಿ ತೀವ್ರಗೊಂಡಿದೆ.

ಬಿಜೆಪಿ - ಜೆಡಿಎಸ್ ಮೈತ್ರಿ ಸಾಧಿಸಿದ ತರುವಾಯ ವಿಧಾನ ಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ ಎದುರಾಯಿತು. ಆಗ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ ಹಾಗೂ ಪದವೀಧರ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವ ಒಡಂಬಡಿಕೆ ಮಾಡಿಕೊಂಡಿತ್ತು.

ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ ಬಳಿಕ ಲೋಕಸಭಾ ಚುನಾವಣೆಯನ್ನು ಎದುರಿಸಿರುವ ಜೆಡಿಎಸ್ - ಬಿಜೆಪಿ ಮಿತ್ರ ಪಕ್ಷಗಳು ಇದೀಗ ಬೆಂಗಳೂರು ಪದವೀಧರ ಕ್ಷೇತ್ರದ ಮೂಲಕ 3ನೇ ಚುನಾವಣೆಗೆ ಸಜ್ಜಾಗುತ್ತಿವೆ.

ಈಗ ಬೆಂಗಳೂರು ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯಲಿದ್ದು, ವಿಧಾನ ಪರಿಷತ್ ಹಾಲಿ ಸದಸ್ಯ ಅ.ದೇವೇಗೌಡ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಅಲ್ಲದೆ, ಹಿರಿಯ ವಕೀಲ ಆರ್.ಎಸ್ .ಉದಯಸಿಂಗ್ , ತೆರಿಗೆ ಸಲಹೆಗಾರ ಎಸ್. ನಂಜುಂಡ ಸ್ವಾಮಿ, ಬಿಜೆಪಿ ರಾಜ್ಯ ಸಂಚಾಲಕರಾಗಿದ್ದ ಅಡಿಗನಹಳ್ಳಿ ಆನಂದ್ , ಮುಖಂಡ ವಿನೋದ್ ಕೃಷ್ಣಮೂರ್ತಿ ಸೇರಿ ಕೆಲವರು ಆಕಾಂಕ್ಷಿಯಾಗಿದ್ದಾರೆ. ಇವರೆಲ್ಲರು ಟಿಕೆಟ್ ಗಾಗಿ ತಮ್ಮ ನಾಯಕರ ಮೂಲಕ ವರಿಷ್ಠರಲ್ಲಿ ಲಾಭಿ ನಡೆಸುತ್ತಿದ್ದಾರೆ.

ಕಮಲ ಕೋಟೆ ಬೇಧಿಸಲು ಕೈ ಪ್ರಯತ್ನ :

ಬೆಂಗಳೂರು ಪದವೀಧರ ಕ್ಷೇತ್ರ ಬಿಜೆಪಿ ಪಾಲಿನ ಭದ್ರಕೋಟೆಯಾಗಿದೆ. 1988 ರಿಂದ 2018ರವರೆಗಿನ ಆರು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾ ಬಂದಿದೆ. ಬಿಜೆಪಿ ಭದ್ರಕೋಟೆಯನ್ನು ಬೇಧಿಸುವುದು ಆಡಳಿತ ರೂಢ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯಾಗಿದೆ.

1988ರ ಚುನಾವಣೆಯಲ್ಲಿ ಬಿಜೆಪಿ ಹಿರಿಯ ಮುಖಂಡ ರಾಮಚಂದ್ರೇಗೌಡ ಮೊದಲ ಬಾರಿ ಆಯ್ಕೆಯಾದರು. ಆನಂತರ 1994, 2000, 2006 ಹಾಗೂ 2012ರ ಚುನಾವಣೆಗಳಲ್ಲಿ ಕ್ರಮವಾಗಿ ಗೆಲುವು ಸಾಧಿಸಿದ್ದರು. ವಯಸ್ಸಿನ ಕಾರಣ 2018ರ ಚುನಾವಣೆಯಲ್ಲಿ ರಾಮಚಂದ್ರೇಗೌಡ ಬದಲಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಅ.ದೇವೇಗೌಡ ಅವರಿಗೆ ಟಿಕೆಟ್ ನೀಡಲಾಯಿತು.

ಸತತವಾಗಿ ಸೋಲನ್ನೇ ಕಂಡಿದ್ದ ಅ.ದೇವೇಗೌಡರು ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಕಳೆದ 36 ವರ್ಷಗಳಿಂದ ಈ ಕ್ಷೇತ್ರ ಬಿಜೆಪಿ ಹಿಡಿತದಲ್ಲಿದೆ. ಈ ಕಾರಣದಿಂದಾಗಿಯೇ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಡಿಸೆಂಬರ್‌ನಲ್ಲಿ ಮತಪಟ್ಟಿ ಪ್ರಕಟ:

ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಮತಪಟ್ಟಿಯನ್ನು ಕಳೆದ ಡಿಸೆಂಬರ್‌ನಲ್ಲಿ ಪ್ರಕಟಿಸಲಾಗಿದ್ದು, ಅದರಂತೆ 1,00,100 ಮತದರಾರರು ಇದ್ದಾರೆ. ಇದರಲ್ಲಿ 48,236 - ಮಹಿಳೆಯರು, 51,852 - ಪುರುಷರು, 12 - ಇತರೆ ಮತದಾರರು ಸೇರಿದ್ದಾರೆ. ಅಂತಿಮ ಮತಪಟ್ಟಿಯಲ್ಲಿ ಮತದಾರರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ರಾಮೋಜಿಗೌಡ 3ನೇ ಬಾರಿ ಅದೃಷ್ಟ ಪರೀಕ್ಷೆ:

ಬೆಂಗಳೂರು ನಗರ ಜಿಲ್ಲಾ ಶಿಕ್ಷಕರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ ಡಾ. ರಾಮೋಜಿ ಗೌಡರವರು ಹಲವಾರು ವರ್ಷಗಳಿಂದ ಶಿಕ್ಷಕರು ಹಾಗೂ ಪದವೀಧರರ ನಾಯಕರಾಗಿ ಗುರುತಿಸಿಕೊಂಡವರು. ಆರು ತಿಂಗಳ ಹಿಂದೆಯೇ ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಣೆ ಮಾಡಿದ್ದರಿಂದ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. 2012 ಮತ್ತು 2018ರ ಚುನಾವಣೆಗಳಲ್ಲಿ ಸೋಲು ಕಂಡಿರುವ ರಾಮೋಜಿಗೌಡರು 3ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಅ.ದೇವೇಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆ

ಹಾಲಿ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಅವರು 2012ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮಚಂದ್ರಗೌಡ ಎದುರು ಕೇವಲ 194 ಮತಗಳಿಂದ ಪರಾಭವಗೊಂಡಿದ್ದರು. ಆದರೂ ಜೆಡಿಎಸ್ ಪಕ್ಷದ ಘನತೆ, ಗೌರವಗಳಿಗೆ ಧಕ್ಕೆ ಬರದಂತೆ ನಡೆದುಕೊಂಡಿದ್ದರು. ವರಿಷ್ಠರೊಂದಿಗೆ ವೈಮನಸ್ಸಿನಿಂದಾಗಿ ಅ.ದೇವೇಗೌಡರು 2018ರ ಚುನಾವಣೆ ವೇಳೆಗೆ ಬಿಜೆಪಿ ಸೇರಿ ಮೇಲ್ಮನೆ ಪ್ರವೇಶಿಸಿದರು. ಈಗ ಮತ್ತೊಮ್ಮೆ ಅವರಿಗೆ ಟಿಕೆಟ್ ಲಭಿಸುವ ಸಾಧ್ಯತೆಗಳು ಹೆಚ್ಚಾಗಿದೆ.

ಜೂನ್ 3ರಂದು ಮತದಾನ

ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಪ್ರಕಟಣೆ ಹೊರೆಡಿಸಿದೆ. ಜೂನ್ 3ರಂದು ಮತದಾನ ನಡೆಯಲಿದೆ. ಮೇ 9ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಮೇ 16ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆ ದಿನ. ಮೇ 17 ನಾಮಪತ್ರಗಳ ಪರಿಶೀಲನೆ, ಮೇ 20 ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ. ಜೂನ್ 3ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ. ಜೂನ್ 6ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಯ ಜೊತೆಗೆ ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ, ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರ, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗು ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಹಾಲಿ ಇರುವ ವಿಧಾನ ಪರಿಷತ್ ಸದಸ್ಯರ ಅಧಿಕಾರ ಜೂನ್ 21 ಕ್ಕೆ ಅಂತ್ಯವಾಗುವ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾಗಿದೆ.

ಪದವೀದರರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಪರಿಷ್ಕೃತ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಸದರಿ ಪಟ್ಟಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

3.ಕಾಂಗ್ರೆಸ್ ರಾಮೋಜಿಗೌಡ

4.ಅ.ದೇವೇಗೌಡ

5.ಉದಯ್ ಸಿಂಗ್

6.ಎಸ್ .ನಂಜುಂಡಸ್ವಾಮಿ

7.ಅಡಿಗನಹಳ್ಳಿ ಆನಂದ್

8.ವಿನೋದ್ ಕೃಷ್ಣಮೂರ್ತಿ

Follow Us:
Download App:
  • android
  • ios