Asianet Suvarna News Asianet Suvarna News

ಮುಂಬೈನ ಹೈ ಪ್ರೊಫೈಲ್ ಕ್ಷೇತ್ರಕ್ಕೆ ಬಿಜೆಪಿಯಿಂದ ಉಗ್ರ ಕಸಬ್‌ ಗಲ್ಲಿಗೆ ಕಾರಣವಾದ ವಕೀಲ ನಿಕಂ ಅಭ್ಯರ್ಥಿ

ಮುಂಬೈ ಉತ್ತರ ಕೇಂದ್ರ ಕ್ಷೇತ್ರದಲ್ಲಿ ಕುತೂಹಲ ಸೃಷ್ಟಿಸಿದ ನಿಕಂ ಸ್ಪರ್ಧೆ. ಕಾಂಗ್ರೆಸ್‌ನಿಂದ ನಗರಾಧ್ಯಕ್ಷೆ ವರ್ಷಾ ಗಾಯಕ್ವಾಡ್‌ ಕಣಕ್ಕೆ. ಜನಪ್ರಿಯತೆ ವರ್ಸಸ್‌ ಸ್ಥಳೀಯತೆ.

Advocate Ujjwal Nikam  candidate for   high profile Mumbai North Central constituency  from BJP gow
Author
First Published May 5, 2024, 3:45 PM IST

ಮುಂಬೈ (ಮೇ.5): ಹೃದಯ ಭಾಗದ ವಿಲ್ಲೆ ಪಾರ್ಲೆಯಂತಹ ಪ್ರತಿಷ್ಠಿತ ಕ್ಷೇತ್ರಗಳನ್ನು ಒಳಗೊಂಡಿರುವ ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರವು ಈ ಬಾರಿ ಅಭ್ಯರ್ಥಿಗಳ ಆಯ್ಕೆಯಿಂದಾಗಿ ಭಾರೀ ಗಮನ ಸೆಳೆಯುತ್ತಿದ್ದು, ಅದನ್ನೇ ಕಾಂಗ್ರೆಸ್‌ ಪಕ್ಷವು ಚುನಾವಣಾ ಪ್ರಚಾರದ ಪ್ರಮುಖ ಘೋಷವಾಕ್ಯವಾಗಿ ಮಾಡಿಕೊಂಡು ಮುಂದಡಿ ಇಡಲು ಸರ್ವಪ್ರಯತ್ನ ನಡೆಸಿದೆ. ಬಿಜೆಪಿಯಿಂದ ಸತತ ಎರಡು ಬಾರಿಗೆ ಹಾಲಿ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದ ಗಟ್ಟಿಗಿತ್ತಿ ಪೂನಂ ಮಹಾಜನ್‌ಗೆ ಕೊಕ್‌ ನೀಡಿ ಖ್ಯಾತ ವಕೀಲ ಉಜ್ವಲ್‌ ನಿಕಂಗೆ ಪಕ್ಷ ಮಣೆ ಹಾಕಿದ್ದರೆ, ಕಾಂಗ್ರೆಸ್‌ ಸಹ ತನ್ನ ಎಂದಿನ ಅಭ್ಯರ್ಥಿಯಾಗಿದ್ದ ನಟಿ ಪ್ರಿಯಾ ಸುನಿಲ್‌ ದತ್‌ರನ್ನು ಕೈಬಿಟ್ಟು ನಗರಾಧ್ಯಕ್ಷೆ ವರ್ಷಾ ಗಾಯಕ್ವಾಡ್‌ಗೆ ಟಿಕೆಟ್‌ ನೀಡಿದ್ದು ನೇರ ಹಣಾಹಣಿ ಏರ್ಪಡಲು ವೇದಿಕೆ ಸಿದ್ಧಗೊಂಡಿದೆ.

ಯಾರಿಂದಲೂ 370 ವಾಪಸ್‌ ತರಲು ಸಾಧ್ಯವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜ ...

ಹೇಗಿದೆ ಬಿಜೆಪಿ ಸ್ಥಿತಿ: ಹಾಲಿ ಸಂಸದೆ ಪೂನಂ ಮಹಾಜನ್‌ ತಮ್ಮ ತಂದೆ ಪ್ರಮೋದ್‌ ಮಹಾಜನ್‌ ಅವರಂತೆಯೇ ಸಂಸತ್ತಿನಪೊಳಗೆ ಮತ್ತು ಹೊರಗೆ ತಮ್ಮ ಪ್ರಖರ ಮಾತುಗಳ ಮೂಲಕ ಪ್ರತಿಪಕ್ಷಗಳ ಟೀಕೆ ಮತ್ತು ಆರೋಪಗಳಿಗೆ ಪ್ರತ್ಯುತ್ತರ ನೀಡಿ ಗಮನ ಸೆಳೆದಿದ್ದರೂ ಕ್ಷೇತ್ರದಲ್ಲಿ ಆಕೆಯ ಕುರಿತು ನಕಾರಾತ್ಮಕ ಅಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ಜನಪ್ರಿಯ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಿದೆ. ಪೂನಂ ಅವರ ತಂದೆ ಪ್ರಮೋದ್‌ ಮಹಾಜನ್‌ ಅವರ ಹತ್ಯೆ ಪ್ರಕರಣದಲ್ಲಿ ನ್ಯಾಯ ದೊರಕಿಸಿದ್ದ ಖ್ಯಾತ ವಕೀಲ ಉಜ್ವಲ್‌ ನಿಕಂಗೆ ಟಿಕೆಟ್‌ ನೀಡಿ ಪೂನಂ ಅವರ ಆಕ್ರೋಶವನ್ನು ತಣಿಸುವ ಪ್ರಯತ್ನ ನಡೆಸಿದ್ದರೆ, ಮತ್ತೊಂದೆಡೆ ಅವರು 1993ರಿಂದ ಹಿಡಿದು 26/11 ರ ಸರಣಿ ಬಾಂಬ್‌ ಪ್ರಕರಣದಲ್ಲಿ ಉಗ್ರ ಕಸಬ್‌ಗೆ ಗಲ್ಲು ಶಿಕ್ಷೆಯಾಗುವ ತನಕ ಹಲವು ಹೈ ಪ್ರೊಫೈಲ್‌ ಕೇಸ್‌ನಲ್ಲಿ ವಾದ ಮಂಡಿಸಿದ್ದನ್ನು ಮುಂದಿಟ್ಟುಕೊಂಡು ಕ್ಷೇತ್ರದ ಗಣ್ಯ ಮತದಾರರನ್ನು ಸೆಳೆಯುವ ಉದ್ದೇಶ ಬಿಜೆಪಿಯದ್ದಾಗಿದೆ. ಇದರ ಜೊತೆಗೆ ಅವರು ಮರಾಠ ಸಮುದಾಯದವರೂ ಆಗಿದ್ದು, ಜಾತಿವಾರು ಬಹುಸಂಖ್ಯಾತವಾಗಿರುವ ಮರಾಠ ಸಮುದಾಯವನ್ನೂ ಸೆಳೆಯುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ. ಆದರೆ ಕಾಂಗ್ರೆಸ್‌ ಪಕ್ಷ ಉಜ್ವಲ್‌ ಕ್ಷೇತ್ರದ ಹೊರಗಿನವರು ಎಂದು ಪ್ರಚಾರ ಮಾಡುತ್ತಿರುವುದು ಅವರಿಗೆ ಮುಳುವಾಗಬಹುದು.

 ಪ್ರಧಾನಿ ಮೋದಿ ಅತ್ಯಾಚಾರಿಗಳ ಪರ ನಿಲ್ಲುತ್ತಾರೆ: ಪ್ರಿಯಾಂಕಾ ಗಾಂಧಿ ಆರೋಪ 

ಕಾಂಗ್ರೆಸ್‌ ಗೆಲ್ಲಬಲ್ಲದೇ?: ಕಾಂಗ್ರೆಸ್‌ ಪಕ್ಷ ಕಳೆದ ಮೂರು ಬಾರಿಯಿಂದ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿದ್ದ ಬಾಲಿವುಡ್‌ ನಟಿ ಸುಪ್ರಿಯಾ ಸುನಿಲ್‌ ದತ್‌ ಅವರನ್ನು ಬದಲಿಸಿ ಮುಂಬೈ ನಗರದ ಕಾಂಗ್ರೆಸ್‌ ಅಧ್ಯಕ್ಷೆ ವರ್ಷಾ ಗಾಯಕ್ವಾಡ್‌ ಅವರಿಗೆ ಮಣೆ ಹಾಕಿದೆ. ಇದರ ಹಿಂದೆ ಪ್ರಮುಖವಾಗಿ ಕಾಂಗ್ರೆಸ್‌ ಪಕ್ಷ ಜಾತಿ ಅಸ್ತ್ರವನ್ನು ಬಳಸಿದ್ದು, ಪ್ರಬಲ ಮರಾಠ ಸಮುದಾಯದ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಹಾರಾಷ್ಟ್ರದಲ್ಲಿ ಈ ಬಾರಿ ರಾಜಕೀಯ ಸಮೀಕರಣಗಳು ಬದಲಾಗಿದ್ದರೂ ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಉತ್ತಮ ನೆಲೆಯಿದೆ. ಅದನ್ನು ಲಾಭ ಮಾಡಿಕೊಂಡು ಸರಿಯಾದ ರೀತಿಯಲ್ಲಿ ಪ್ರಚಾರ ನಡೆಸಿದರೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ. ಈ ಭಾಗವಾಗಿ ಕಾಂಗ್ರೆಸ್‌ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ‘ಒಳಗಿನವರು ವರ್ಸಸ್‌ ಹೊರಗಿನವರು’ ಎಂಬ ಅಭಿಯಾನ ಆರಂಭಿಸಿದೆ. ವರ್ಷಾ ಇದೇ ಕ್ಷೇತ್ರದ ವಿಲ್ಲೆ ಪಾರ್ಲೆ ನಿವಾಸಿಯಾಗಿದ್ದರೆ ಉಜ್ವಲ್‌ ಪಕ್ಕದ ಬಾಂದ್ರಾದಲ್ಲಿ ವಾಸಿಸುತ್ತಿದ್ದಾರೆ. ಇದಕ್ಕೆ ಬಿಜೆಪಿ ಸರಿಯಾಗಿ ತಿರುಗೇಟು ನೀಡದಿದ್ದರೆ ಕಾಂಗ್ರೆಸ್‌ಗೆ ಮತದಾರರು ಕೈ ಹಿಡಿಯಬಹುದು.

ಸ್ಪರ್ಧೆ ಹೇಗೆ?: ಒಟ್ಟಿನಲ್ಲಿ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಗಳು ಬದಲಾಗಿರುವುದರಿಂದ ಮತದಾರರು ತುಸು ಆಲೋಚಿಸಿ ಮತ ನೀಡುವುದಂತೂ ನಿಶ್ಚಿತ. ಈ ನಿಟ್ಟಿನಲ್ಲಿ ಬಿಜೆಪಿಯು ಜನಪ್ರಿಯತೆಗೆ ಮಣೆ ಹಾಕಿದ್ದರೆ ಕಾಂಗ್ರೆಸ್‌ ಪಕ್ಷವು ಸ್ಥಳೀಯತೆಯನ್ನು ಮುಂದಿಟ್ಟುಕೊಂಡು ಜನರಲ್ಲಿ ಮತಯಾಚಿಸುತ್ತಿವೆ. ಇವರಿಬ್ಬರ ಪ್ರಯೋಗದಲ್ಲಿ ಮತದಾರ ಯಾವುದನ್ನು ಅನುಮೋದಿಸುತ್ತಾನೆ ಎನ್ನುವುದೇ ಕುತೂಹಲ.

ಸ್ಟಾರ್‌ ಕ್ಷೇತ್ರ: ಮುಂಬೈ ಉತ್ತರ ಕೇಂದ್ರ

ರಾಜ್ಯ: ಮಹಾರಾಷ್ಟ್ರ

ಮತದಾನದ ದಿನ: ಮೇ 20

ವಿಧಾನಸಭಾ ಕ್ಷೇತ್ರಗಳು: 6

ಪ್ರಮುಖ ಅಭ್ಯರ್ಥಿಗಳು:

ಬಿಜೆಪಿ - ಉಜ್ವಲ್‌ ನಿಕಂ

ಕಾಂಗ್ರೆಸ್‌ - ವರ್ಷಾ ಗಾಯಕ್ವಾಡ್‌

ಪಕ್ಷೇತರ - ಫಿರೋಜ್‌

2019ರ ಫಲಿತಾಂಶ:

ಗೆಲುವು: ಬಿಜೆಪಿ - ಪೂನಂ ಮಹಾಜನ್‌

ಸೋಲು: ಕಾಂಗ್ರೆಸ್‌ - ಸುಪ್ರಿಯಾ ಸುನಿಲ್‌ ದತ್‌

Follow Us:
Download App:
  • android
  • ios